ನರ ಮತ್ತು ಮನೋರೋಗ ಔಷಧಶಾಸ್ತ್ರ -   
ನರಕೋಶಗಳ ಕ್ರಿಯೆಯ ಮೇಲೆ ಪ್ರಭಾವ ಬೀರುವ ಔಷಧಿಗಳಿಗೆ ಸಂಬಂಧಿಸಿದ ಅಧ್ಯಯನ ನರರೋಗ ಔಷಧಶಾಸ್ತ್ರ (ನ್ಯೂರೊಫಾರ್ಮಕಾಲಜಿ); ಮನೋವಿಕಾರ ಮತ್ತು ಭಾವಾವೇಶ ಸಂದರ್ಭಗಳಲ್ಲಿ (ಫೆಕ್ಟಿವ್ ಮತ್ತು ಇಮೋಷನಲ್ ಸ್ಟೇಟ್ಸ್) ಉಪಯುಕ್ತವಾಗುವ ಔಷಧಗಳಿಗೆ ಸಂಬಂಧಿಸಿದ ಅಧ್ಯಯನ ಮನೋರೋಗ ಔಷಧ ಶಾಸ್ತ್ರ (ಸೈಕೊಫಾರ್ಮಕಾಲಜಿ). ಈ ಔಷಧಿಗಳು ಸಾಮಾನ್ಯವಾಗಿ ನರಮಂಡಲದ ಮೇಲೆ ಮಾತ್ರ ಪ್ರಭಾವ ಬೀರುವುದೆಂಬುದು ವ್ಯಕ್ತ. ಇವುಗಳ ಪೈಕಿ ಕೆಲವೊಂದರ ಅನುಭವಜನಿತ ಉಪಯೋಗಗಳು ಹಲವಾರು ಶತಮಾನಗಳಿಂದಲೇ ತಿಳಿದಿವೆ. ಉದಾಹರಣೆಗೆ ಅರಿವಳಿಕಗಳು (ಅನೀಸ್ಥೆಟಿಕ್ಸ್), ನೋವಳಿಕಗಳು (ಅನಾಲ್‍ಜೆಸಿಕ್ಸ್), ಮದ್ಯಸಾರಗಳು (ಅಲ್ಕೊಹಾಲ್ಸ್), ನಿದ್ರಾಜನಕಗಳು (ಹಿಪ್ನಾಟಿಕ್ಸ್) ಇತ್ಯಾದಿ. ಸ್ಟ್ರಿಕ್ನೀನ್, ಕೆಫೀನ್, ಅಂಫಿಟಮೀನ್ ಇತ್ಯಾದಿ ದ್ರವ್ಯಗಳೂ ಬಹುಕಾಲದಿಂದ ಬಳಕೆಯಲ್ಲಿವೆ. ಆದರೆ ಆರೋಗ್ಯಸ್ಥಿತಿಯಲ್ಲಿ ನರಮಂಡಲಚೋದನಕಾರಿಗಳಾದ ಈ ದ್ರವ್ಯಗಳು ಮನೋರೋಗಗಳಿಂದ ಆತಂಕಗೊಂಡ ರೋಗಿಗಳಲ್ಲಿ ಅಷ್ಟೇನೂ ಪರಿಣಾಮಕಾರಿಗಳಾಗಿಲ್ಲ ಮತ್ತು ಅದರ ಚರ್ಯೆಗಳನ್ನು ಉತ್ತಮಪಡಿಸಲು ಸಾಮಾನ್ಯವಾಗಿ ಅನುಕೂಲಕಾರಿಗಳಾಗಿಯೂ ಇಲ್ಲ. ಪ್ರಸಕ್ತ ಶತಮಾನದ ಮಧ್ಯಭಾಗದ ತನಕ ಇಂಥ ಔಷಧಗಳಿಗೆ ಸಂಬಂಧಪಟ್ಟ ವಿಜ್ಞಾನದ ಬೆಳೆವಣಿಗೆಯ ಸುಳಿವೂ ಇರಲಿಲ್ಲ. ಅನಂತರ ಕೆಲವು ಪ್ರಮುಖ ಮನೋರೋಗಗಳಲ್ಲಿ ಉಪಯುಕ್ತವಾಗಿ ಕಂಡುಬಂದ ರಿಸರ್ಪಿನ್ (ಸರ್ಪಗಂಧಿ) ಮತ್ತು ಕ್ಲೋರ್‍ಪ್ರೋಮಜೀನ್ ಇವುಗಳ ವ್ಯಾಸಂಗದಿಂದ ಈ ಶಾಸ್ತ್ರಗಳು ಆರಂಭವಾದುವು ಎನ್ನಬಹುದು. ಸ್ಕಿಜೊóಫ್ರೀನಿಯ ಎಂಬ ಮನೋರೋಗಕ್ಕೆ ರಿಸರ್ಪಿನ್ನನ್ನು ಚಿಕಿತ್ಸಕವಾಗಿ ಬಳಸಿದ್ದೇ ಈ ದಿಶೆಯಲ್ಲಿ ಪ್ರಥಮ ಹೆಜ್ಜೆ. ಇದು ಸ್ವಾಸ್ಥ್ಯಕಾರಿ (ಟ್ರ್ಯಾನ್‍ಕ್ವಿಲ್ಲೈಸರ್) ಎಂಬ ಅಂಶ ಗೊತ್ತಾಯಿತು. ಸ್ಕಿಜೊóಫ್ರೀನಿಯವೇ ಅಲ್ಲದೆ ಹಲವಾರು ಬಗೆಯ ಮನೋರೋಗಗಳಲ್ಲಿ ಕೂಡ ಇದು ಉಪಯುಕ್ತವಾಗಿರುವುದು ತಿಳಿಯಿತು. ರಿಸರ್ಪಿನ್ ಅಲ್ಲದೆ ಬೇರೆ ಸ್ವಾಸ್ಥ್ಯಕಾರಿಗಳ ಶೋಧನೆಗಾಗಿ ಅನೇಕ ರಾಸಾಯನಿಕಗಳನ್ನೂ ದ್ರವ್ಯಗಳನ್ನೂ ಪ್ರಾಣಿಗಳ ಮೇಲೆ ಪ್ರಯೋಗಿಸಿ ವ್ಯಾಸಂಗವನ್ನು ಮುಂದುವರಿಸಲಾಗಿದೆ. ಇಂಥ ಸ್ವಾಸ್ಥ್ಯಕಾರಿ ಔಷಧಿಗಳು ಮನೋರೋಗಗಳಲ್ಲಿ ಉಪಯುಕ್ತವಾಗಿವೆ ಎಂಬ ತಿಳಿವಳಿಕೆಯಿಂದ ಮನೋರೋಗಔಷಧಶಾಸ್ತ್ರ ಮಹತ್ತರವಾಗಿ ಅಭಿವೃದ್ಧಿಗೊಳ್ಳುತ್ತಿದೆ.

ತೀವ್ರ ರೀತಿಯ ಮಾನಸಿಕ ಕಾಯಿಲೆಗಳಿಗೆ ಮೊಟ್ಟಮೊದಲ ಪರಿಣಾಮಕಾರಿ ಔಷಧಿಯಾಗಿ 'ಕ್ಲೋರ್ ಪ್ರೊಮ ಜಿನ್ 1952ರಲ್ಲಿ ಬಳಕೆಗೆ ಬಂದಿತು. ನ್ಯೂರೋ ಲೆಪ್ಟಿಕ್ಸ್ ಅಥವಾ ಮೇಜರ್ ಟ್ರಾನ್‍ಕ್ವಿಲೈ ಸರ್ಸ್ ಎಂದು ಕರೆಸಿಕೊಂಡ ಫೀನೋತೈಯಾಜೀನ್ಸ್, ಪಿಪರ್‍ಜೀನ್ಸ್, ತೈಯೋಕ್ಯಾಲೇನ್ಸ್, ಬುಟರೋಫೀನೈನ್ಸ್ ಆನಂತರ ಬಳಕೆಗೆ ಬಂದುವು. ಮೆಂಟಲ್ ಅಸೈಲಮ್‍ಗಳಲ್ಲಿ (ಹುಚ್ಚಾಸ್ಪತ್ರೆ) ಚಿಕಿತ್ಸೆ ಇಲ್ಲದೆ ಕೊಳೆಯುತ್ತಿದ್ದ ಸ್ಕಿಜೋಫ್ರೀನಿಯಾ, ಮೇನಿಯಾ ರೋಗಿಗಳು ಈ ಔಷಧಿಗಳಿಂದ ಉತ್ತಮಗೊಂಡರು. ಅಸೈಲಮ್‍ಗಳಿಂದ ಬಿಡುಗಡೆ ಪಡೆದರು. ಕೇವಲ ಒಳರೋಗಿ ವ್ಯವಸ್ಥೆ ಇದ್ದ, ಮಾನಸಿಕ ಆಸ್ಪತ್ರೆಗಳಲ್ಲಿ ಹೊರರೋಗಿವಿಭಾಗಗಳು ಅಸ್ತಿತ್ವಕ್ಕೆ ಬಂದುವು. ಮನೋರೋಗಿಗಳು ತಮ್ಮ ಮನೆಯಲ್ಲಿ ಇದ್ದು, ಚಿಕಿತ್ಸೆ ಪಡೆದು ಗುಣಮುಖರಾಗತೊಡಗಿದರು. ಈಗ ಎಟಿಪಿಕÀಲ್ ಆಂಟಿಸೈಕಾಟಿಕ್ಸ್‍ಗಳಾದ ರಿಸ್ಪಿರಿಡಾನ್, ಓಲಾಂಜೆಪಿನ್, ಜಿಪ್ರೊಸಿಡಾನ್, ಕ್ಲೋಜಪಿನ್, ಅಲಿಪಿಪ್ರಜೋಲ್ ಈಗ ಹೆಚ್ಚು ಬಳಕೆಯಲ್ಲಿವೆ.

	ನರರೋಗ ಮತ್ತು ಮನೋರೋಗಗಳ ಚಿಕಿತ್ಸೆಗೆ ಬಳಸುವ ಇನ್ನಿತರ ಔಷಧಗಳಲ್ಲಿ ಮನೋಮಾಂದ್ಯಜನಕಗಳು (ಆಂಟಿಡಿಪ್ರೆಸೆಂಟ್ಸ್), ಶಾಮಕಗಳು (ಸೆಡೆಟಿವ್ಸ್), ಚೇತಕಗಳು, (ಸ್ವಿಮ್ಯುಲೆಂಟ್ಸ್) ಆತಂಕಹಾರಿಗಳು (ಆಂಕ್ಸಿಲಿಟಿಕ್ಸ್) ಇತ್ಯಾದಿ ಗುಂಪುಗಳಿಗೆ ಸೇರಿದವು ಇವೆ. ಈ ಎಲ್ಲ ಔಷಧದ್ರವ್ಯಗಳೂ ರೋಗಿಯ ಲಹರಿ (ಮೂಡ್) ಮತ್ತು ವರ್ತನೆಗಳನ್ನು (ಬಿಹೇವಿಯರ್) ಬದಲಿಸುವಂಥವು. ಇವು ನರಮಂಡಲದ ಯಾವ ವಿಶಿಷ್ಟ ಭಾಗದಲ್ಲಿ ಮತ್ತು ಹೇಗೆ ಕ್ರಿಯಾಶೀಲವಾಗುತ್ತವೆ  ಎಂಬ ತಪಶೀಲು ನಿಖರವಾಗಿ ಇನ್ನೂ ಅಷ್ಟಾಗಿ ತಿಳಿದಿಲ್ಲ. ಸ್ವತಂತ್ರ ನರಮಂಡಲದ ಮೇಲೆ (ಆಟೊನಾಮಿಕ್ ನರ್ವಸ್ ಸಿಸ್ಟಮ್) ಕೆಲವು ಪ್ರಭಾವ ಬೀರುತ್ತವೆ. ಇದರಿಂದ ಗುಂಡಿಗೆಯ ಕ್ರಿಯೆ, ರಕ್ತದ ಒತ್ತಡ, ಕರುಳಿನ ಚಲನವಲನ, ಚರ್ಮದ ಬಣ್ಣ, ಕಣ್ಣಿನ ಪಾಪೆ ಇವುಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಮಿದುಳಿನ ಮೇಲೆ ಕೆಲವು ನೇರವಾಗಿ ವರ್ತಿಸಿ ಅಲ್ಲಿಂದ ಹಲವು ರಾಸಾಯನಿಕಗಳು (ನ್ಯೂರೊಹ್ಯೂಮರ್ಸ್) ಬಿಡುಗಡೆಯಾಗುವಂತೆ ಇಲ್ಲವೇ ಅಲ್ಲೇ ತಡೆಹಿಡಿಯಲ್ಪಡುವಂತೆ ಮಾಡುತ್ತವೆ. ಇವು ನರ, ಸ್ನಾಯು ಮತ್ತು ಇತರ ಕೋಶಗಳ ಕ್ರಿಯೆಗಳ ಮೇಲೆ ಪ್ರಭಾವ ಬೀರುವುವೆಂದು ತಿಳಿದಿದೆ. ಅನೇಕ ಔಷಧಗಳು ಮನೋವೈಕಲ್ಯ (ಸೈಕೊಸಸ್) ಮತ್ತು ಭಾವೋದ್ವೇಗದ ಮನೋರೋಗಗಳಲ್ಲಿ (ನ್ಯೂರೊಸಿಸ್) ಪರಿಣಾಮಕಾರಿ. ಆತಂಕಗೊಂಡ ಮನೋರೋಗಿಗಳನ್ನು ಸ್ವಸ್ಥ್ಯಗೊಳಿಸುವಲ್ಲಿ, ಉದ್ರೇಕಗೊಂಡ ಮನೋರೋಗಿಗಳನ್ನು ಸಮಾಧಾನ ಮಾಡುವಲ್ಲಿ ಭ್ರಮೆಯನ್ನು ಕಡಿಮೆ ಮಾಡಲು ಮತ್ತು ಭ್ರಮೆಯಿಂದ ಬಳಲುವ ರೋಗಿಗಳನ್ನು ಗುಣಪಡಿಸುವಲ್ಲಿ ಈ ಔಷಧಗಳು ಆತ್ಯುಪಯುಕ್ತವಾಗಿ ಅಂಥ ರೋಗಿಗಳ ಸಂಖ್ಯೆಯನ್ನು ಆಸ್ಪತ್ರೆಗಳಲ್ಲಿ ಕಡಿಮೆ ಮಾಡಲು ಬಹು ಉಪಕಾರಿಗಳಾಗಿರುವುದಂತೂ ನಿಜ.

ಭ್ರೆಮೆ, ಬೇಗುದಿ ತಳಮಳಗಳನ್ನು ಹೋಗಲಾಡಿಸುವ ಔಷಧದ್ರವ್ಯಗಳೂ ಉಂಟು. ಜೀವನದಲ್ಲಿ ಮಾನಸಿಕ ಸಿಡಿಯುವಿಕೆಯ ಅನುಭವವಾಗುವುದು ಅಪರೂಪವಲ್ಲ. ಈ ಸ್ಥಿತಿಯಲ್ಲಿ ಹಲವು ಟಿಪಿಕಲ್ ಮತ್ತು ಎಟಿಪಿಕಲ್ ಆಂಟಿ ಸೈಕಾಟಿಕ್ ಔಷಧಗಳು ಮಾತ್ರೆ, ಸಿರಪ್ ಮತ್ತು ಸೂಜಿರೂಪದಲ್ಲಿ ಲಭ್ಯವಿದ್ದು ವರಪ್ರದವಾಗಿರುವುವು. ಇಂಥ ಎಲ್ಲ ಔಷಧಗಳನ್ನೂ ಅಧಿಕ ಪ್ರಮಾಣದಲ್ಲಿ ದೀರ್ಘಕಾಲಿಕವಾಗಿ ಬಳಸಬೇಕಾಗುವ ಸಂದರ್ಭಗಳು ಅನೇಕ ಉಂಟು. ಆದರೆ ಹಾಗೆ ಬಳಸುವುದರಿಂದ ಸಾಮಾನ್ಯವಾಗಿ ಚಟ ಹತ್ತುವುದಾಗಲಿ ನಂಜು (ಟಾಕ್ಸಿಸಿಟಿ) ಏರುವುದಾಗಲಿ, ಅಥವಾ ಬೇರೆ ವಿಧದ ದುಷ್ಪರಿಣಾಮಗಳಾಗಲಿ ಕಂಡುಬಂದಿಲ್ಲ.

ಮನೋರೋಗ ಚಿಕಿತ್ಸೆಗಾಗಿ ಪುರಾತನ ಕಾಲದಿಂದ ಆಚರಣೆಯಲ್ಲಿದ್ದ ಅಮಾನುಷ ದೈಹಿಕ ವಿಧಾನಗಳನ್ನು ತೊಡೆದುಹಾಕಿ, ಮಾನಸಿಕ ರೋಗಗಳನ್ನು ಸರ್ವೇಸಾಮಾನ್ಯವಾದ ದೈಹಿಕ ರೋಗಗಳಂತೆ ಮಾನವತೆಯ ಆಧಾರದ ಮೇಲೆ ಚಿಕಿತ್ಸೆಮಾಡಲು ಈ ನರರೋಗ ಔಷಧಗಳು ಮತ್ತು ಮನೋರೋಗ ಔಷಧಗಳು ಒಂದು ಪವಾಡವನ್ನೇ ಮಾಡಿದಂತಾಗಿವೆ. ಇತ್ತೀಚೆಗೆ ಮನೋರೋಗಿಗಳನ್ನು ಅವರವರ ಮನೆಯಲ್ಲಿ ಇಟ್ಟುಕೊಂಡು ಉಪಚರಿಸಿ ಶುಶ್ರೂಷೆಮಾಡಿ ಗುಣಪಡಿಸಲು ಈ ಔಷಧಗಳು ಮಹಾವರಗಳೇ ಆಗಿವೆ. ಮನೋರೋಗಕ್ಕೆ ಮದ್ದಿಲ್ಲ ಎಂಬ ನಾಣ್ಣುಡಿ ಈಗ ಸುಳ್ಳಾಗಿದೆ. ಮನೋರೋಗಿಗಳಿಗೆ ಯಶಸ್ವೀ ಚಿಕಿತ್ಸೆ ಈಗ ಸಾಮಾನ್ಯ ಆಸ್ಪತ್ರೆ - ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಭ್ಯವಾಗುತ್ತಿದೆ.       
										(ಎನ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ